ರಾಜ್ಯದಲ್ಲೇ ಮೊದಲ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ

ಮಂಡ್ಯ ಮಂಜುನಾಥ್‌
ಮದ್ದೂರು: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ರೈತರ ಆರ್ಥಿಕ ಸುಧಾರಣೆಗಾಗಿ ತಾಲೂಕಿನಲ್ಲಿ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ ಹಾಗೂ ರೈತ ಉತ್ಪಾದಕ ಕಂಪನಿ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ರಜಿತ್‌ ರಂಜನ್‌ ಒಖಂಡಿಯಾರ್‌ ತಿಳಿಸಿದರು. ಪಟ್ಟಣದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ನಡೆದ ರೇಷ್ಮೆ ಕೃಷಿ ಮೆಗಾ ಕ್ಲಸ್ಟರ್‌ ರಚನೆ, ರೈತ ಉತ್ಪಾದಕ ಕಂಪನಿ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
 
ನೇರ ಮಾರಾಟಕ್ಕೆ ಸಹಕಾರ: ರೈತರು ಬೆಳೆದ ರೇಷ್ಮೆ ಬೆಲೆಗೆ ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗುವ ಜತೆಗೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ನಿಯಂತ್ರಿಸಲು ತಾಲೂಕಿನಲ್ಲಿ ರೈತ ಉತ್ಪಾದಕ ಕಂಪನಿಯನ್ನು ಪ್ರಾರಂಭಿಸುವ ಜತೆಗೆ ರೈತರೇ ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭ ಗಳಿಕೆಗೆ ಸಹಕಾರಿಯಾಗಲಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ರೈತ ಉತ್ಪಾದಕ ಕಂಪನಿ ತೆರೆಯುತ್ತಿರುವುದು ಸಂತಸದ ವಿಚಾರ. ತಾಲೂಕಿನ ಬಿದರಕೋಟೆ, ತೊರೆಶೆಟ್ಟಹಳ್ಳಿ ಹಾಗೂ ಮಳವಳ್ಳಿ ತಾಲೂಕಿನ ಗಾಜನೂರು, ಅಲಸದಹಳ್ಳಿ ಗ್ರಾಮಗಳನ್ನು ಒಟ್ಟುಗೂಡಿಸಿ ಮೆಗಾ ರೇಷ್ಮೆ ರಹಿತ ಉತ್ಪಾದಕ ಕಂಪನಿ ಪ್ರಾರಂಭಿಸಲು ಮುಂದಾಗಿದ್ದು, ರೈತರು ಇದರ ಸದುಪಯೋಗಕ್ಕೆ ಮುಂದಾಗುವಂತೆ ಮನವಿ ಮಾಡಿದರು.
 
ಮಿಶ್ರತಳಿ ಬೆಳೆಗಳಿಗೆ ಆದ್ಯತೆ: ಜಿಲ್ಲಾದ್ಯಂತ ಮಿಶ್ರತಳಿ ಬೆಳೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಉತ್ತಮ ಲಾಭ ಗಳಿಕೆಯಿಂದ ವಿಮುಖವಾಗುತ್ತಿವೆ. ಆದ್ದರಿಮದ ಇಲಾಖೆ ಅಧಿಕಾರಿಗಳು ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿವೆ. ಗುಣಮಟ್ಟದ ರೇಷ್ಮೆ ಬೆಳೆಗೆ ಹೆಚ್ಚಿನ ಗಮನಹರಿಸಬೇಕು. ನೇರವಾಗಿ ತಾವೇ ಪ್ರಾರಂಭಿಸಿದ ರೈತರ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರೈತ ಉತ್ಪಾದಕ ಕಂಪನಿ ಪ್ರಾರಂಭಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಜಿ.ಸಿ.ವೃಷೇಬೇಂದ್ರಮೂರ್ತಿ, ನಿರ್ದೇಶಕ ಡಾ.ಆರ್‌.ಎಸ್‌.ತೆವತಿಯಾ, ನಿವೃತ್ತ ಉಪ ಕುಲಪತಿ ಡಾ.ಎಸ್‌.ಬಿ.ದಂಡಿನ್‌, ಮೈಸೂರು ಜಂಟಿ ನಿರ್ದೇಶಕ ಬಿ.ರಾಧಾಕೃಷ್ಣ ರೈ, ಜಿಲ್ಲಾ ಉಪನಿರ್ದೇಶಕಿ ಬಿ.ಆರ್‌.ಪ್ರತಿಮಾ, ಸಹಾಯಕ ನಿರ್ದೇಶಕ ಎಂ.ಬಸವರಾಜು, ಸಿಇಒ ಎನ್‌.ವೈ.ಚಿಗರಿ ಹಾಜರಿದ್ದರು.